ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಮಾತಿನ ಲೋಕದ ಮೆಲುಕು

ಲೇಖಕರು :
ನಾ.ಕಾರ೦ತ, ಪೆರಾಜೆ
ಭಾನುವಾರ, ಫೆಬ್ರವರಿ 7 , 2016

ಯಕ್ಷಗಾನದ ಪೂರ್ಣಾವತಾರಿ ಸೂರಿಕುಮೇರು ಗೋವಿಂದ ಭಟ್ಟರು ಆರು ದಶಕದ ಯಕ್ಷಗಾನದ ಇತಿಹಾಸಕ್ಕೆ ಸಾಕ್ಷಿಯಾಗುತ್ತಾರೆ. ಅವರೊಂದಿಗೆ ಸ್ವಲ್ಪ ಹೊತ್ತು :-

1953-54 ಇಸವಿಯ ಆಜೂಬಾಜು. ಕಲಾಭಿಮಾನಿ ಕಾಂದಿಲ ವೆಂಕಟ್ರಾಯರ ಯಜಮಾನಿಕೆಯಲ್ಲಿ ಕೂಡ್ಲು ಮೇಳ ಸಂಪನ್ನವಾಗಿತ್ತು. ರಂಗದಲ್ಲಿ ಮಾತುಗಾರಿಕೆಯನ್ನು ಅಪೇಕ್ಷಿಸಿದ ಕಾಲಘಟ್ಟವದು. ಮೇಳಕ್ಕೆ ಹರಿದಾಸ್ ಮಲ್ಪೆ ಶಂಕರನಾರಾಯಣ ಸಾಮಗರು ಸೇರ್ಪಡೆಗೊಂಡರು. ಅವರ ಅರ್ಥಗಾರಿಕೆ ಆಗ ಮನೆಮಾತು. ಮೇಳಕ್ಕೆ ಕಲೆಕ್ಷನ್ ಹೆಚ್ಚಾಯಿತು. ಅದೇ ಸಮಯಕ್ಕೆ ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರವೇಶವಾಗಿತ್ತು. 'ನನಗೆ ಕುಣಿತ ಗೊತ್ತಿಲ್ಲ, ಬಣ್ಣಗಾರಿಕೆ ಗೊತ್ತಿಲ್ಲ' ಅಂತ ಶೇಣಿಯವರು ಹೇಳಿದರೂ ಕೇಳಲಿಲ್ಲ. ಬಳಿಕ ಮಲ್ಪೆ ರಾಮದಾಸ ಸಾಮಗರನ್ನು ರಂಗಕ್ಕೆ ತಂದರು. ಆಗ 'ಆಟ ನೋಡುವ' ಪ್ರೇಕ್ಷಕರಲ್ಲಿ ಬೌದ್ಧಿಕತೆಯಿತ್ತು. ವಿಮರ್ಶಿಸುವ ಗುಣವಿತ್ತು. ಹರಿದಾಸರುಗಳ ಪ್ರವೇಶದಿಂದ ಯಜಮಾನರ ಆರ್ಥಿಕ ಸ್ಥಿತಿ ಸುಧಾರಿಸಿತು. ಎಲ್ಲಾ ವರ್ಗದ ಜನ ಬರಲು ಶುರು ಮಾಡಿದರು.

ಚಿತ್ರ ಕೃಪೆ : ರಾಮ್ ನರೇಶ್ ಮ೦ಚಿ
1967-68. ಮಾತುಗಾರಿಕೆಯನ್ನು ಪ್ರೀತಿಸಿದ ಪ್ರೇಕ್ಷಕರ ನಂತರದ ಪೀಳಿಗೆಗೆ ಮಾತುಗಾರಿಕೆ ದೀರ್ಘ ಅಂತ ಅನ್ನಿಸಿತು. ಅವರ ಮನಃಸ್ಥಿತಿಗೆ 'ಬೋರ್' ಆಯಿತು! ಹಿರಿಯರಿಂದ ಬೌದ್ಧಿಕ ಸಂಪತ್ತು ಹೇಳುವಷ್ಟು ಕಿರಿಯರಿಗೆ ವರ್ಗಾವಣೆಯಾಗಲಿಲ್ಲ. 'ಯಕ್ಷಗಾನ ನಾಶವಾಯಿತು' ಎಂಬಲ್ಲಿಗೆ ಬಂತು! ಪ್ರೇಕ್ಷಕರು ಬದಲಾವಣೆ ಬಯಸಿದರು. ಇರಾ ಸೋಮನಾಥೇಶ್ವರ ಯಕ್ಷಗಾನ ನಾಟಕ ಮಂಡಳಿಯವರು ಮೊದಲ ಬಾರಿಗೆ ಹೆಜಮಾಡಿಯಲ್ಲಿ 'ಕೋಟಿ ಚೆನ್ನಯ' ತುಳು ಆಖ್ಯಾನವನ್ನು ಪ್ರದರ್ಶಿಸಿದರು. ಎರಡು ವರುಷ ಜಯಭೇರಿ ಬಾರಿಸಿತು. ನಂತರ ಪಾಡ್ದನ ಆಧಾರಿತ ತುಳು ಪ್ರಸಂಗಗಳು ರಚನೆಯಾದುವು. ಪ್ರೇಕ್ಷಕರ ಒಲವು ಗಳಿಸಿತು.

1956 ಇರಬೇಕು, ಕಲ್ಲಾಡಿ ಕೊರಗ ಶೆಟ್ಟರು ಎರಡು ಮೇಳ ಮಾಡಿದ್ರು. ಒಂದು ಮೇಳವನ್ನು ವಿಠಲ ಶೆಟ್ಟರಿಗೆ ಬಿಟ್ಟು ಕೊಟ್ಟರು. ಕೊರಗ ಶೆಟ್ಟರು ಹೊಸ ಸೆಟ್ ಮಾಡಿದ್ರು. ಆ ಕಾಲಕ್ಕೆ ವೀರಭದ್ರ ನಾಯಕರು, ರಾಮದಾಸ ಸಾಮಗರು.. ಮೇಳದಲ್ಲಿ ಮುಖ್ಯ ಕಲಾವಿದರು. ಒಂದೇ ಕಡೆ ವಾರ, ಹದಿನೈದು ದಿವಸಗಳ ಟೆಂಟ್ ಪ್ರದರ್ಶನಗಳಾಗುತ್ತಿದ್ದುವು.

1995-96 - 'ಮಾತು ಹೆಚ್ಚಾಯಿತು' ಎನ್ನುವವರು ಕಡಿಮೆಯಾದರು. 'ಕುಣಿತ ಹೆಚ್ಚಾಯಿತು' ಕೂಗು ಎದ್ದಿತು. ಈಗ....! ಕಲಾವಿದರು ಚೆನ್ನಾಗಿ ಕುಣಿಯುತ್ತಾರೆ. 'ನೀನು ಏನು ಕುಣಿಯುತ್ತಿ' ಎಂದು ಕೇಳಿದರೆ ಹೇಳಲು ಕಷ್ಟವಾಗಬಹುದೇನೋ? ಮೊದಲು 'ತಾನೇನು ಕುಣಿಯುತ್ತೇನೆ' ಎನ್ನುವ ಜ್ಞಾನ ಕುಣಿಯುವವನಿಗೆ ಗೊತ್ತಿತ್ತು. ಶಾಸ್ತ್ರವು ಬೆಳೆದು ಬಂದದ್ದೇ ಹಾಗೆ ಅಲ್ವಾ. ಶಾಸ್ತ್ರೀಯವಾದ ಆಧಾರ ಇಲ್ಲ ಅಂತ ವಾದ ಶುರುವಾಯಿತು. ಹೇಗೆ ಬೇಕಿದ್ದರೂ ಮಾಡಬಹುದು. ಈಗ ಹೇಗೆ ಮಾಡ್ತಿ ಅಂತ ಕೇಳುವ ಹಾಗಿಲ್ಲ. ಅವನವನಿಗೆ ಖುಷಿ ಬಂದ ಹಾಗೆ ರಂಗದಲ್ಲಿ ನಡೆಯುತ್ತದೆ.

ವೇಷಕ್ಕೆ 'ಇದಮಿತ್ಥಂ' ಎನ್ನುವ ತೀರ್ಮಾನ ಮೊದಲಿನಿಂದಲೂ ಇಲ್ಲ. 'ಇದು ಬಣ್ಣದ ವೇಷ' ಅಂತ ಒಬ್ಬರು ಮಾಡಿದರು. ಅವರನ್ನು ಇತರರು ಅನುಕರಿಸಿದರು. ಅವರವರ ಜ್ಞಾನದಂತೆ ಅಭಿವೃದ್ಧಿಪಡಿಸಿದರು. ನಾಟ್ಯ ಶಾಸ್ತ್ರವನ್ನು ಯಾರೂ ನೋಡಿದವರಿಲ್ಲ. ನೋಡಿ ಹೀಗೆ ಆಗಬೇಕು ಎಂದು ಹೇಳಿದವರಿಲ್ಲ. ಹಾಗಾದರೆ ಶಾಸ್ತ್ರ ಎಂದಿನಿಂದ ಆರಂಭ ಆಯಿತು? ಆರಂಭ ಕಾಲದಲ್ಲಿ ಜನಪದದಲ್ಲಿ ಇದ್ದಂತಹ ನೃತ್ಯ ವಿಶೇಷ, ಮಾತು, ಅಭಿನಯಗಳನ್ನು ಶಾಸ್ತ್ರಕಾರ ಒಂದು ಸ್ವರೂಪಕ್ಕೆ ತಂದಿರಬಹುದು. ಗ್ರಾಮ್ಯವಾದ ಕಲೆಗೆ ಆಕಾರ ಕೊಡುವ, ಜನಜೀವನವನ್ನು ತಿದ್ದುವುದಕ್ಕೆ ಗ್ರಾಮ್ಯಧರ್ಮಕ್ಕೆ ಸುಂದರತೆ ಕೊಟ್ಟಿದ್ದಿರಬೇಕು.

ಆಗ ಒಂದೆರಡು ವಾಕ್ಯದ ಅರ್ಥಗಾರಿಕೆಯಷ್ಟೇ. ಪದ್ಯದಲ್ಲಿರುವ ಭಾವಾರ್ಥ ಹೇಳಿದರೆ ಹೆಚ್ಚು. ಕ್ರಮೇಣ ಕುರಿಯ ಶಾಸ್ತ್ರಿಗಳಂತಹ ಪ್ರತಿಭಾ ಸಂಪನ್ನರು, ಪ್ರಜ್ಞಾವಂತರು ರಂಗ ಪ್ರವೇಶಿಸಿದರು. ವಿದ್ಯಾವಂತ ಪ್ರೇಕ್ಷಕರು ಸಿದ್ಧರಾದರು. ಅರ್ಥಗಾರಿಕೆಯಲ್ಲಿ ಸುಧಾರಣೆಯಾಯಿತು. ಹಿರಿಯ ಬಲಿಪ ನಾರಾಯಣ ಭಾಗವತರು (ಈಗಿನ ಬಲಿಪ ನಾರಾಯಣ ಭಾಗವತರ ಅಜ್ಜ) 'ಮಾತಿನಲ್ಲಿ ಸ್ಪಷ್ಟತೆ ಬೇಕು. ರಂಗಸ್ಥಳದಲ್ಲಿ ಹಗುರವಾಗಿ ಮಾತನಾಡಕೂಡದು' ಎಂದು ಎಚ್ಚರಿಸುತ್ತಿದ್ದರು. ಕಲಾವಿದರಿಗೆ ಅರ್ಥ, ಸನ್ನಿವೇಶಗಳ ಪಾಠ ಮಾಡುತ್ತಿದ್ದರು. ಕಲಾವಿದರು ಒಪ್ಪಿಕೊಂಡಿದ್ದರು ಕೂಡಾ. ಕ್ರಮೇಣ ಭಾಗವತರಲ್ಲಿ ಅರ್ಥವನ್ನು ಕೇಳಿಯೇ ರಂಗಪ್ರವೇಶ ಮಾಡುವ ಪರಿಪಾಠ ಬಂತು. ಈಗಿನ ಭಾಗವತರುಗಳಿಗೂ ಕಲಾವಿದರು 'ಕೇಳಿದರೆ' ಹೇಳಲು ಗೊತ್ತು!

ಶೇಣಿ, ಸಾಮಗರು ರಂಗಪ್ರವೇಶಿಸಿದ ಬಳಿಕ ಅವರ ಜತೆಗಿದ್ದ ಕಲಾವಿದರು ಅನಿವಾರ್ಯವಾಗಿ ಅರ್ಥ ಕಲಿಯಲು ಶುರು ಮಾಡಿದರು. ಅರ್ಥಗಾರಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಭೆಯಿಂದ ಪ್ರತಿಕ್ರಿಯೆ ಬರುತ್ತಿತ್ತು. ಅದನ್ನು ಯಾರೂ ಆಕ್ಷೇಪಿಸುತ್ತಿರಲಿಲ್ಲ. ಅಂದರೆ ಪ್ರೇಕ್ಷಕರಿಗೂ ಪುರಾಣ, ಪ್ರಸಂಗದ ಜ್ಞಾನವಿತ್ತು. ರಂಗವನ್ನು ಪ್ರೇಕ್ಷಕರು ಗಮನಿಸುತ್ತಾ ಇರುತ್ತಾರೆ. ಆದರೆ ಈಗ ನೋಡಿ.. ಎಷ್ಟೊಂದು ಬದಲಾಗಿದೆ. ಕಲಾವಿದ ಪ್ರೇಕ್ಷಕರ ಕುರಿತು ಗಮನವೇ ಕೊಡುವುದಿಲ್ಲ! ಯಾಕೆಂದರೆ ಅವನ ಅಭಿಮಾನಿಗಳು ತೃಪ್ತರಾಗುವಷ್ಟು ಮಾತ್ರ ಅಭಿವ್ಯಕ್ತಿ ಮಾಡುತ್ತಾನೆ! ಇದು ಪ್ರೇಕ್ಷಕರ ಕುರಿತಾದ ಅಸಡ್ಡೆ ಅಲ್ಲ.

ಈಗ ಪೂರ್ಣಪ್ರಮಾಣದ ಪ್ರೇಕ್ಷಕರು ತೀರಾ ಕಡಿಮೆ. ಹೊಸತಾಗಿ ಆಸಕ್ತಿ ರೂಢಿಸಿಕೊಂಡ ಪ್ರೇಕ್ಷಕರಿದ್ದಾರಲ್ಲಾ, ಅವರ ಅಭಿರುಚಿಗಳೇ ಬೇರೆ. ಅವರಿಗೆ ಬೇಗ ಆಟ ಮುಗಿಯಬೇಕು. ರಾತ್ರಿಯಿಡೀ ನಿದ್ರೆಗೆಡುವುದು ಸಾಧ್ಯವಿಲ್ಲ. ಜೀವನದಲ್ಲಿ ಬೇರೆ ಬೇರೆ ವ್ಯವಹಾರಗಳಿವೆ. ಒತ್ತಡವಿದೆ. ಕೂಡುಕುಟುಂಬಗಳೆಲ್ಲಾ ಛಿದ್ರವಾದುವು. ಕುಟುಂಬಗಳು ಬೇರೆಯಾದುವು. ಮನೆಯಲ್ಲಿರುವುದು ಗಂಡ, ಹೆಂಡತಿ, ಎರಡು ಮಕ್ಕಳು ಮಾತ್ರ.... ಹೀಗೆ ಕೌಟುಂಬಿಕ ಸಮಸ್ಯೆಗಳು. ಯಕ್ಷಗಾನದ ಆಸಕ್ತಿಗಳಿಗೆ ಈಗಿನ ಜೀವನ ವಿಧಾನವು ಸ್ಪಂದಿಸುವುದಿಲ್ಲ.

*********************


ಲೇಖನ ಕೃಪೆ : yakshamatu.blogspot


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Srirama Dongre(2/10/2016)
ವಸ್ತುನಿಷ್ಠ ಮತ್ತು ವಿಷಾದದಿಂದ ಕೂಡಿದ ಅನಿಸಿಕೆ ಶ್ರೀ ಗೋವಿಂದ ಭಟ್ಟರದ್ದು. ಕಲೆಯನ್ನು ಸುಂದರ ಸ್ವರೂಪದಲ್ಲಿ ಉಳಿಸಿಕೊಳ್ಳುವುದು ಕಲಾರಸಿಕರಿಗೂ ಮತ್ತು ಕಲಾವಿದರಿಗೂ ಈಗ ಆದ್ಯತೆಯಲ್ಲದ ವಿಷಯ.ಕಾಲದ ಮತ್ತು ಕಲೆಯ ಹರಿವನ್ನು ನಿಯಂತ್ರಿಸುವುದು ಅಸಾಧ್ಯ. ಸಣ್ಣ ಕಟ್ಟಿಯನ್ನು ಕಟ್ಟಿ ವೇಗವನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದೇನೋ ? ಆದರೆ ತಡೆಯನ್ನು ಮೀರಿ ಅಥವಾ ಒಡೆದು ಸಾಗುವುದೇ ಕಲಾಪ್ರವಾಹದ ಗುಣ. ಕಾಲನಿಗೆ ಯಾರೂ ಎದುರಿಲ್ಲ.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ